Back to feed
N
Navya Gupta Life · English · General

ನಮ್ಮ ಮನಸ್ಸೇಕೆ ಬಾರವಾಗಿರುತ್ತೆ? ನಾನೇನೂ ಮನಶಾಸ್ತ್ರದ ವಿದ್ಯಾರ್ಥಿಯಲ್ಲ. ಆದರೂ ಅನುಭವಕ್ಕಿಂತ ಬೇರೆ ಏನು ಬೇಕಲ್ವಾ? ಜೀವನದ 80% ಭಾಗ ಮುಗಿದಮೇಲೂ ಅನುಭವ ಹಂಚಿಕೊಳ್ಳಬಾರದೇ? ಸಮಾಜಕ್ಕೆ ಏನೂ ತಿಳಿಸದೆ ನಮ್ಮ ಆಟ ಮುಗಿಸಿಬಿಟ್ಟರೆ ಏನು ಸಾರ್ಥಕ? ಅದಕ್ಕಾಗಿ ಒಂದಿಷ್ಟು ವಿಚಾರ ಹಂಚಿಕೊಳ್ಳುವ ಪ್ರಯತ್ನ. ಒಮ್ಮೆ ನಮ್ಮ ಅಂತರಂಗಕ್ಕೆ ಪ್ರಶ್ನೆ ಮಾಡಿಕೊಂಡು ನೋಡೋಣ. ನಮ್ಮ ಮನಸ್ಸಿನಲ್ಲಿ ತುಂಬಿರುವುದೇನೆಂದು? ಆ ವಿಚಾರಗಳಿಂದ ನಮಗೆ ಸಿಗುವ ಲಾಭವೇನೆಂದು? ಹೀಗೆ ಮಾಡಿದ್ದೇ ಆದರೆ ನಮ್ಮ ಅಂತರಂಗಕ್ಕೆ ಅರಿವಾಗುತ್ತದೆ " ನನ್ನೊಳಗೆ ನನಗೆ ಬೇಡದ ವಿಚಾರಗಳೇ ಹೆಚ್ಚು ತುಂಬಿವೆ. ನಮಗೆ ಬೇಡವಾದುದೆಂದರೆ ಏನಂತಾ ವಿವರಿಸುವ ಅಗತ್ಯವಿದೆಯೇ? ಖಂಡಿತಾ ಇಲ್ಲ. ಯಾವುದು ನಮಗೆ ಸಂತೋಷ ಕೊಡುವುದಿಲ್ಲ, ಯಾವ ವಿಚಾರ ನಮಗೆ ಪ್ರೇರಣೆ ಕೊಡುವುದಿಲ್ಲ, ಯಾವ ವಿಚಾರವು ನನ್ನನ್ನು ಕುಂದಿಸುತ್ತದೆ, ಯಾವ ವಿಚಾರ ನನ್ನ ಲವಲವಿಕೆಯನ್ನು ತಡೆಗಟ್ಟುತ್ತದೆ........ಆ ವಿಚಾರಗಳು!! ಬೇಡವೆಂದರೂ ಇವೆಲ್ಲಾ ನಮ್ಮೊಳಗೆ ಸೇರಿಬಿಟ್ಟಿರುತ್ತವೆ. ಇದನ್ನು ಹೊರದೂಡಲು ಇರುವ ಒಂದು ಸಾಧನ ವೆಂದರೆ ಪ್ರಾಣಾಯಾಯ-ಧ್ಯಾನ! ಮೊನ್ನೆ ನನ್ನ ಮಿತ್ರ ಕೊಟ್ರೇಶ್ ಉಪ್ಪಾರ್ ನನಗೆ ಫೋನ್ ಮಾಡಿ ನನ್ನ ಕವನ ಒಂದರ ಬಗ್ಗೆ ಮಾತನಾಡಿದರು. ಅವರು ಮಾತನಾಡುತ್ತಾ " ಸಾರ್, ಕವನ ಅದ್ಭುತವಾಗಿದೆ. ಆದರೆ "ಕೊನೆಯಲ್ಲಿ ಅದನ್ನು ಸಂಕುಚಿತಗೊಳಿಸಿದಿರಿ" ಎಂದು. ಅದೇನೆಂದು ಕೇಳಿದೆ. ಅದಕ್ಕೆ ಅವರೆಂದರು " ಪರಿಹಾರ ಯೋಗ-ಪ್ರಾಣಾಯಾಮ-ಧ್ಯಾನ ದಲ್ಲಿದೆ" ಎಂದು ಮುಕ್ತಾಯಗೊಳಿಸಿದ್ದೀರಲ್ಲಾ! ಅದು ಸರಿಹೋಗಲಿಲ್ಲ. ಎಂದು. ಹಾಗಾದರೆ ಆ ಜಾಗದಲ್ಲಿ ಏನು ಬರೆಯಬೇಕಿತ್ತು ನೀವೇ ಯೋಚಿಸಿ ತಿಳಿಸಿ ಎಂದೆ. ಈ ಮಾತೇಕೆ ಎಂದರೆ ಯೋಗ-ಪ್ರಾಣಾಯಾಮ-ಧ್ಯಾನ ಎಂದರೆ ಅದು ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಬಿಡುತ್ತದೆಂಬುದು ಅವರ ಕಲ್ಪನೆ. ಹೀಗೆ ಯೋಚಿಸಿಯೇ " ವೇದ" ಎಂದರೂ ಅದು ಒಂದು ವರ್ಗಕ್ಕೆ ಮೀಸಲೆಂದು ಭಾವಿಸಿ ನಮ್ಮ ಋಷಿಮುನಿಗಳು ತಪಸ್ಸಿನಿಂದ ಪಡೆದ ಜ್ಞಾನವು ಹೇಗೆ ಎಲ್ಲರಿಗೂ ತಲುಪಬೇಕಾಗಿತ್ತೋ ಹಾಗೆ ತಲುಪಲೇ ಇಲ್ಲ. ಯೋಗ-ಪ್ರಾಣಾಯಾಮ-ಧ್ಯಾನವೂ ಅಷ್ಟೆ." ಇದು ಎಲ್ಲರಿಗಲ್ಲ" ಎಂಬ ಭಾವನೆ ಸಮಂಜಸವಲ್ಲ. ಎಂತಾ ಅದ್ಭುತ ವಿಜ್ಞಾನ! ಅದು. ಆದರ ಲಾಭ ಎಲ್ಲರಿಗೂ ಆಗಬೇಕು. ಆಗ ಮಾತ್ರ ಜಗತ್ತಿನಲ್ಲಿ ನೆಮ್ಮದಿ ಸಾಧ್ಯ! ಪುನಃ ವಿಷಯಕ್ಕೆ ಬರುವೆ. ನಮ್ಮೊಳಗೆ ನಮಗರಿವಿಲ್ಲದಂತೆ ಋಣಾತ್ಮಕ ವಿಷಯಗಳು ಸೇರಿಹೋಗಿರುತ್ತದೆ -ತಾಮ್ರದ ಪಾತ್ರೆಯು ಕಿಲುಬುಗಟ್ಟಿದಂತೆ. ಅದನ್ನು ಖಾಲಿಮಾಡಿದರೆ ನಿರಾಳ. ಆಗ ಮನಸ್ಸು ಹಗುರ. ಪ್ರಾಣಾಯಾಮ ಮಾಡುವಾಗ ಇದು ಸಾಧ್ಯ! ಪ್ರಯತ್ನ ಮಾಡಿನೋಡಿ. ಪ್ರಾಣಾಯಾಮ ಮಾಡುವಾಗ ಉಸಿರನ್ನು ಹೊರಹಾಕುವಾಗ ನನ್ನೊಳಗೆ ತುಂಬಿರಬಹುದಾದ ಕಲ್ಮಷಗಳು, ದುಃಖ ದುಮ್ಮಾನಗಳು, ದ್ವೇಷ ,ಅಸೂಯೆ, ಮತ್ಸರ....ಇತ್ಯಾದಿ ನಮ್ಮ ಆನಂದವನ್ನು ತಡೆದಿರುವ ಋಣಾತ್ಮಕ ಸಂಗತಿಗಳನ್ನು ಮನಸ್ಸಿನಿಂದ ಹೊರಹಾಕುತ್ತಿದ್ದೇನೆಂಬ ಭಾವನೆಯಿಂದ ಉಸಿರನ್ನು ಹೊರಹಾಕಿ, ಅಂತೆಯೇ ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಪ್ರೀತಿ, ಪ್ರೇಮ, ಮಮಕಾರ, ವಾತ್ಸಲ್ಯ ಗಳು ನನ್ನದಾಗಲೆಂಬ ಭಾವನೆಯಿಂದ ಉಸಿರು ತೆಗೆದು ಕೊಳ್ಳಿ.ಹೀಗೆ ನಿತ್ಯವೂ ಭಸ್ತ್ರಿಕಾ ಪ್ರಾಣಾಯಾಮ ಮಾಡುವಾಗ ಪ್ರಯತ್ನ ಮಾಡಿನೋಡಿ. ನೀವು ಹಗುರಾಗಿ ಬಿಡುತ್ತೀರಿ. ಇದು ನಿತ್ಯವೂ ಬೆಳಗ್ಗೆ ಅರ್ಧಗಂಟೆ, ಸಂಜೆ ಅರ್ಧ ಗಂಟೆ ಮಾಡಬೇಕಾದ ಕ್ರಿಯೆ. ಹೀಗೆ ಮಾಡುವಾಗ ನಾವು ಕಳೆದುಕೊಂಡಿರುವ ಸಹಜ ಆನಂದವು ಮತ್ತೆ ಲಭ್ಯವಾಗುತ್ತದೆ. ಹೇಗೆ ಆಲೋಚಿಸುತ್ತೇವೆ, ಹಾಗೇ ನಾವಾಗಿಬಿಡುತ್ತೇವೆ. ಇದಕ್ಕೆ ಬೇಕಾದ್ದು ಶ್ರದ್ಧೆ. ಮತ್ತು ನಿರಂತರ ಪ್ರಯತ್ನ. ತಾಮ್ರದ ಪಾತ್ರೆಯನ್ನು ಒಂದು ದಿನ ಹುಣಿಸೆ ಹಣ್ನು ಉಜ್ಜಿ ತೊಳೆಯದಿದ್ದರೂ ಅದರ ಬಣ್ಣ ವೆತ್ಯಾಸ ವಾಗುವುದಿಲ್ಲವೇ! ಹಾಗೆಯೇ ಒಂದು ದಿನ ನಮ್ಮ ಈ ಪ್ರಯತ್ನ ನಿಂತರೂ ಮತ್ತೆ ಮನಸ್ಸು ಬಾರವಾಗುತ್ತದೆ. ಮನಸ್ಸಿನ ಬಾರದಿಂದಲೇ ಹತ್ತು ಹಲವು ವ್ಯಾಧಿಗಳು! ನಿತ್ಯವೂ ಕಲ್ಮಷ ಸಂಗ್ರಹವಾಗಿ ಮನಸ್ಸು ಬಾರ ವಾಗುತ್ತದೆ. ಶರೀರವು ರೋಗಕ್ಕೆ ತುತ್ತಾಗುತ್ತದೆ. ಪ್ರಾಣಾಯಾಮ ಧ್ಯಾನ ದಿಂದ ಕೊಳೆಯನ್ನು ತೊಳೆಯಲು ಸಾಧ್ಯ. ಈಗ ಹೇಳಿ ಮನಸ್ಸನ್ನು ಹಗುರಮಾಡಿಕೊಳ್ಳಲು ಸಾಧ್ಯವಿಲ್ಲವೇ? ಅದಕ್ಕೆ ವೈದ್ಯರ ಔಷಧಿ ಬೇಕೋ ಪ್ರಾಣಾಯಾಮ ಧ್ಯಾನ ಬೇಕೋ?

130 likes 19 shares
WhatsApp